ಗ್ರಾಮ ಪಂಚಾಯಿತಿ ಕಾರ್ಯದರ್ಶಿ (ಗ್ರೇಡ್–2) ಮತ್ತು ಎಸ್‌ಡಿಎಎ ಹುದ್ದೆಗಳಿಗೆ ಬಿಲ್ ಕಲೆಕ್ಟರ್, ಅಕೌಂಟೆಂಟ್, ಕ್ಲರ್ಕ್, ಟೈಪಿಸ್ಟ್, ಕ್ಲರ್ಕ್ ಕಂ ಡೇಟಾ ಎಂಟ್ರಿ ಆಪರೇಟರ್ ವೃಂದದ ಹುದ್ದೆಗಳಿಂದ ನೇರ ನೇಮಕಾತಿ ಪ್ರಕ್ರಿಯೆಯನ್ನು ತಕ್ಷಣ ಆರಂಭಿಸುವಂತೆ ಎಲ್ಲ ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ (ಆರ್‌ಡಿಪಿಆರ್) ಪ್ರಧಾನ ಕಾರ್ಯದರ್ಶಿ ಸೂಚಿಸಿದ್ದಾರೆ.
ಈ ರೀತಿಯ ನೇರ ನೇಮಕಾತಿಗೆ ಅವಕಾಶ ಕಲ್ಪಿಸಲು ‘ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ) (ವೃಂದ ಮತ್ತು ನೇಮಕಾತಿ) ನಿಯಮಗಳು– 2008’ಕ್ಕೆ ತಿದ್ದುಪಡಿ ತರಬೇಕಾಗಿದೆ. ಆದರೆ, ತಿದ್ದುಪಡಿಗೆ ಹೆಚ್ಚಿನ ಕಾಲಾವಕಾಶ ಬೇಕಾಗಿರುವುದರಿಂದ ಅದರ ಬದಲು ಕಾರ್ಯಕಾರಿ ಆದೇಶದ ಮೂಲಕ ನೇಮಕಾತಿ ವಿಧಾನವನ್ನು ರೂಪಿಸಲಾಗಿದೆ.
ಗ್ರಾಮ ಪಂಚಾಯಿತಿ ಕಾರ್ಯದರ್ಶಿ (ಗ್ರೇಡ್–2) ವೃಂದದ ಶೇ 70ರಷ್ಟು ಹುದ್ದೆಗಳನ್ನು 3:2 ಅನುಪಾತದಲ್ಲಿ ನೇಮಕಾತಿಗೆ ಅವಕಾಶ ನೀಡಲಾಗಿದೆ. ಅಂದರೆ, ಮೊದಲ ಮೂರು ಹುದ್ದೆಗಳನ್ನು ಬಿಲ್ ಕಲೆಕ್ಟರ್ ವೃಂದದ ನೌಕರರಿಂದ, ನಂತರ ಎರಡು ಹುದ್ದೆಗಳನ್ನು ಅಕೌಂಟೆಂಟ್, ಕ್ಲರ್ಕ್, ಟೈಪಿಸ್ಟ್, ಕಂ ಡೇಟಾ ಎಂಟ್ರಿ ಆಪರೇಟರ್ ವೃಂದದಿಂದ ನೇಮಕಾತಿ ಮಾಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ. ಉಳಿದ ಶೇ 50ರಷ್ಟು ಖಾಲಿ ಹುದ್ದೆಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಮೂಲಕ ನೇರ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.